ಸಿದ್ದರಾಮಯ್ಯನವರು ಯಾವತ್ತಿಗೂ ಸ್ಟ್ರಾಂಗ್, ಅದಕ್ಕೆ ಅವರಿಗೆ ಹುಲಿ ಎಂದು ಹೆಸರು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರಾಜ್ಯದಲ್ಲಿ ಕೆಲವು ಅಂಗನವಾಡಿ ಕೇಂದ್ರಗಳನ್ನು ಪೂರ್ವ ಪ್ರಾಥಮಿಕ ಶಾಲೆಗೆ ಉನ್ನತೀಕರಿಸುವ ಪ್ರಕ್ರಿಯೆ ಜಾರಿಯಲ್ಲಿದೆ, ವರದಿ ಬಂದ ತಕ್ಷಣ ಹೆಚ್ಚಿನ ಮಾಹಿತಿ ನೀಡುವುದಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ಉಡುಪಿ: ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣದ ವೇಳೆ ಬುಲೆಟ್ ಪ್ರೂಫ್ ತೆಗೆಸಿದ್ದಕ್ಕೆ ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಕರ್ನಾಟಕ ರಾಜ್ಯ ಶಾಂತಿ ಪ್ರಿಯರು. ಕರ್ನಾಟಕ ರಾಜ್ಯದಲ್ಲಿ ಬುಲೆಟ್ ಪ್ರೂಫ್ ಬೇಕಾ, ನಮ್ಮ ಸಿದ್ದರಾಮಯ್ಯನವರು ಯಾವತ್ತೂ ಸ್ಟ್ರಾಂಗ್ ಅದರಲ್ಲಿ ಎರಡು ಮಾತಿಲ್ಲ‌. ಸಿದ್ದರಾಮಯ್ಯ ನವರಿಗೆ ಹುಲಿ ಎಂದು ಹೆಸರು ಬಂದಿರುವುದು ಇದಕ್ಕೆ ಎಂದು ಹೊಗಳಿದ್ದಾರೆ.ಉಡುಪಿ ಜಿಲ್ಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರವಂತೆ - ಸೋಮೇಶ್ವರ ಬೀಚ್ ಬಂದರು ಕಾಮಗಾರಿ ವಿಳಂಬವಾಗಿರುವುದು ನನ್ನ ಗಮನಕ್ಕೆ ಬಂದಿದ್ದು, ಈ ಸಂಬಂಧ ಗುತ್ತಿಗೆದಾರ ಬಿರಾದಾರ್ ಜೊತೆ ಮಾತನಾಡಿದ್ದೇನೆ. ಕಾಮಗಾರಿಗೆ ಚುರುಕು ಮುಟ್ಟಿಸುವ ಕೆಲಸ ಮಾಡುತ್ತೇವೆ. ನಿರ್ದಿಷ್ಟ ಅವಧಿಯಲ್ಲಿ ಕೆಲಸ ಮುಗಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.ಉಡುಪಿಯಲ್ಲಿ ಕಡಲ್ಕೊರೆತದಿಂದ ಉಂಟಾಗುತ್ತಿರುವ ಸಮಸ್ಯೆಯ ಪರಿಹಾರಕ್ಕಾಗಿ 5 ರಿಂದ 10 ಕೋಟಿ ಬಿಡುಗಡೆ ಮಾಡಿಸಿಕೊಂಡು ಬರುವುದಾಗಿ ಹೇಳಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರಾಜ್ಯದಲ್ಲಿ ಕೆಲವು ಅಂಗನವಾಡಿ ಕೇಂದ್ರಗಳನ್ನು ಪೂರ್ವ ಪ್ರಾಥಮಿಕ ಶಾಲೆಗೆ ಉನ್ನತೀಕರಿಸುವ ಪ್ರಕ್ರಿಯೆ ಜಾರಿಯಲ್ಲಿದೆ, ವರದಿ ಬಂದ ತಕ್ಷಣ ಹೆಚ್ಚಿನ ಮಾಹಿತಿ ನೀಡುವುದಾಗಿ ಹೇಳಿದರು.ಕಂಚಿನಡ್ಕ ಬಳಿ ಟೋಲ್ ಗೇಟ್ ಗೆ ವಿರೋಧವಾಗಿರುವ ಬಗ್ಗೆ ನನಗೆ ಮಾಹಿತಿ ಬಂದಿದ್ದು, ನಾಲ್ಕು ಕಿಲೋಮೀಟರ್ ನಲ್ಲಿ ಎರಡು ಟೋಲ್ ಗೇಟ್ ಬಂದಿರುವುದು ಬಹಳ ಚರ್ಚೆಯಾಗುತ್ತಿದೆ. ಜಿಲ್ಲಾಧಿಕಾರಿ, ಎಸ್ ಪಿ, ಇತರ ಅಧಿಕಾರಿಗಳ ಜೊತೆ ನಾನು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸುವೆ. ಅಲ್ಲಿರುವ ಸಮಸ್ಯೆ ಏನು ಎಂದು ನೋಡುತ್ತೇನೆ. ಎರಡು ಕಡೆ ಸುಂಕ ಕೊಡುವುದು ಜನರಿಗೆ ಸಮಸ್ಯೆಯಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳಿದರು.